ಬರ್ನಾರ್ಡ್ ಕಾಟ್ಸ್
1911. ಇಂಗ್ಲೆಂಡಿನಲ್ಲಿ ನೆಲಸಿರುವ ವೈದ್ಯ ವಿಜ್ಞಾನಿ ಜನನ 26.3.1911 ಲೈಪ್ಸಿಗಿನಲ್ಲಿ, ಮೂಲತಃ ರಷ್ಯಾದೇಶದ ಯಹೂದ್ಯ ಮತಸ್ಥ. ಐಚ್ಛಿಕ ಸ್ನಾಯುಗಳಿಗೆ ನರಸಂದೇಶ ತಲಪಿ ಕಾರ್ಯಗತವಾಗುವುದರಲ್ಲಿ ರಾಸಾಯನಿಕಗಳ ಪಾತ್ರವನ್ನು ಸ್ಪಷ್ಟವಾಗಿ ತಿಳಿಯಪಡಿಸಿ ಚಿಕಿತ್ಸಾಕ್ರಮಗಳಲ್ಲಿ ಇಂಥ ರಾಸಾಯನಿಕಗಳ ಉಪಯುಕ್ತತೆಗಳನ್ನು ಸೂಚಿಸಿದ್ಧಕ್ಕಾಗಿ ದೇಹಕಾರ್ಯ ವಿಜ್ಞಾನ ಹಾಗೂ ವೈದ್ಯಕೀಯಕ್ಕೆ ಮೀಸಲಾದ ನೊಬೆಲ್ ಪಾರಿತೋಷಿಕ ಪಡೆದ (1970). ಬಾರ್ನಾರ್ಡ್ ಕಾಟ್ಸ್ ಲಂಡನ್ನಿನ ಯೂನಿವರ್ಸಿಟಿ ಕಾಲೇಜಿನಲ್ಲಿ ಪ್ರಸಿದ್ಧ ದೇಹಕಾರ್ಯ ವಿಜ್ಞಾನಿ ಎ.ವಿ.ಹಿಲ್ ಇವನ ಕೈಕೆಳಗೆ ವ್ಯಾಸಂಗಿಸಿ 1938ರಲ್ಲಿ ಲಂಡನ್ ವಿಶ್ವವಿದ್ಯಾಲಯದ ಪಿಎಚ್.ಡಿ. ಡಿಗ್ರಿಯನ್ನೂ ಮುಂದೆ ಆಸ್ಟ್ರೇಲಿಯದ ಸಿಡ್ನಿ ನಗರದಲ್ಲಿ ಪ್ರಸಿದ್ಧ ದೇಹಕಾರ್ಯವಿಜ್ಞಾನಿ ಎಕ್ಲಿಸನ ಕೈಕೆಳಗೆ ಕಾರ್ನೆಗಿ ನಾಮಾಂಕಿತ ವಿದ್ಯಾರ್ಥಿಯಾಗಿ ಸಂಶೋಧನೆ ಮುದುವರಿಸಿ 1943ರಲ್ಲಿ ಲಂಡನ್ನಿನ ಡಿ.ಎಸ್‍ಸಿ. ಡಿಗ್ರಿಯನ್ನೂ ಪಡೆದ.

	1941ರಲ್ಲಿ ಆಸ್ಟ್ರೇಲಿಯದ ವಲಸೆಗಾರನಾಗಿ ಗಣಿಸಲ್ಪಟ್ಟು 1942ರಲ್ಲಿ ಅಸ್ಟ್ರೇಲಿಯ ರಾಯಲ್ ವಾಯುಪಡೆಯಲ್ಲಿ ಸೇನಾವೈದ್ಯನಾಗಿ ಸೇರಿ ಎರಡನೆಯ ಮಹಾಯುದ್ಧ ಮುಗಿಯುವ ತನಕವೂ ಸೇವೆ ಸಲ್ಲಿಸಿದ. 1946ರಲ್ಲಿ ಎ.ವಿ. ಹಿಲ್ಲನ ಪ್ರಯೋಗಾಲಯದಲ್ಲಿ ಸಂಶೋಧನ ಸಹಾಯಕ ನಿರ್ದೇಶಕನಾಗಿ ನೇಮಿಸಲ್ಪಟ್ಟದ್ಧರಿಂದ ಲಂಡನ್ನಿಗೆ ವಾಪಸಾದ. 1950-52ರ ಅವಧಿಯಲ್ಲಿ ಇವನು ಲಂಡನ್ ವಿಶ್ವವಿದ್ಯಾಲಯದಲ್ಲಿ ದೇಹ ಕ್ರಿಯಾವಿಜ್ಞಾನದ ರೀಡರ್ ಅಗಿದ್ಧ. 1952ರಲ್ಲಿ ಇವನಿಗೆ ರಾಯಲ್ ಸೊಸೈಟಿ ಫೆಲೋಶಿಪ್ಪಿನ ಗೌರವ ದೊರೆಯಿತು. ಅದೇ ವರ್ಷ ಲಂಡನ್ ವಿಶ್ವವಿದ್ಯಾಲಯದಲ್ಲಿ ಜೀವಭೌತವಿಜ್ಞಾನದ ಪ್ರಾಧ್ಯಾಪಕನಾಗಿ ನೇಮಕಗೊಂಡ. 1968ರಲ್ಲಿ ರಾಯಲ್ ಕಾಲೇಜ್ ಫಿಸಿಷಿಯನ್ನಿನ ಫೆಲೋ ಅಗಿ ಗೌರವಿತನಾದ.
(ಎಸ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ